Sunday, November 02, 2008

ಮಾಕ್ವೈರ್ ದ್ವೀಪ

ಸಮುದ್ರಮಟ್ಟದಿಂದ ಅತಿ ಎತ್ತರದಲ್ಲಿರುವ ಇಲ್ಲಿನ ಭೂ ಪ್ರದೇಶ ಮತ್ತು ಬಂಡೆಗಳು ಇಡೀ ವಿಶ್ವದಲ್ಲಿ ಅಪರೂಪವಾದದ್ದು. ಪೆಸಿಫಿಕ್ ಸಾಗರ ನೈರುತ್ಯ ಮೂಲೆಯಲ್ಲಿ ಇರುವ ಈದ್ವೀಪ ಅಂಟಾರ್ಟಿಕಾ ಮತ್ತು ಆಸ್ಟ್ರೇಲಿಯಾಗಳ ನಡುವೆ ಹಂಚಿ ಹೋಗಿದೆ.
1810ರಲ್ಲಿ ಫ್ರೆಡರಿಕ್ ಹ್ಯಾಸಲ್ ಬರೋ ಎಂಬಾತನಿಂದ ಪತ್ತೆಯಾದ ದ್ವೀಪವಿದು. ಸೀಲ್ ಗಳ ಭೇಟೆಗೆ ಹೊರಟಿದ್ದ ಹ್ಯಾಸಲ್ ಗೆ ಈ ದ್ವೀಪ ಕಂಡಿದ್ದೆ ಇದು ಬ್ರಿಟನ್ನಿಗೆ ಸೇರಿದ್ದೆಂದು ಹೇಳಿದ. ನಂತರ ನ್ಯೂ ಸೌತ್ ವೇಲ್ ನ ಗವರ್ನರ್ ಆಗಿದ್ದ ಕರ್ನಲ್ ಲ್ಯಾಂಚ್ಲನ್ ಮ್ಯಾಕ್ವೈರ್ ಹೆಸರಡಿಲಾಯಿತು.
ಭೂಮಿಯ ವಿಕಾಸ, ಇತಿಹಾಸದ ಅನೇಕ ಅಧ್ಯಾಯಗಳನ್ನು ಈ ದ್ವೀಪ ಒದಗಿಸುತ್ತದೆ. ಭೂಖಂಡಗಳ ಅಲೆತ ಸಿದ್ಧಾಂತಗಳಿಗೆ ಪುರಾವೆಗಳು ಇಲ್ಲಿ ಸಿಕ್ಕಿವೆ. ಈ ದ್ವೀಪ ಕಡಲ ಹಕ್ಕಿ ಪೆಂಗ್ವಿನ್‌ಗಳ ಸ್ವರ್ಗವೂ ಹೌದು. ಸಮೀಕ್ಷೆಯೊಂದರ ಪ್ರಕಾರ ಇಲ್ಲಿ ಸುಮಾರು ೮.೫ ಲಕ್ಷ ಜೊತೆ ಪೆಂಗ್ವಿನ್ ಹಕ್ಕಿಗಳೂ ವಾಸವಾಗಿವೆ. ಪೆಂಗ್ವಿನ್ ಗಳ ಸಾಕಣೆ ಇಲ್ಲಿನ ಮುಖ್ಯ ಉದ್ಯಮ.

೧೯೯೭ರಲ್ಲಿ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಮಾಕ್ವೈರ್ ದ್ವೀಪದ ಹೆಸರು ಸೇರಿಸಲಾಯಿತು.

ಪುರ್ನುಲುಲು


ಬೆಣಚುಕಲ್ಲಿನ ದೊಡ್ಡ ರಾಶಿಯೇ ಈ ಉದ್ಯಾನದ ತುಂಬಾ. ಆಸ್ಟ್ರೇಲಿಯಾದ ಪ್ರಮುಖ ಉದ್ಯಾನಗಳ ಪೈಕಿ ಒಂದಾಗಿರುವ ಪುರ್ನುಲುಲು ಉದ್ಯಾನ ೨೦ ಮಿಲಿಯನ್ ವರ್ಷಗಳ ಹಿಂದೆ ಮೈದಾಳಿ ನಿಂತಿದ್ದು. ಸಮುದ್ರ ಮಟ್ಟದಿಂದ 578 ಮೀಟರ್ ಎತ್ತರದಲ್ಲಿ ಶಂಖದಾಕೃತಿಯಲ್ಲಿ ನಿಂತಿರುವ ಇಲ್ಲಿನ ಶಿಲಾ ಗೋಪುರಗಳು ಒಂದು ಕೋನದಲ್ಲಿ ಶಿಲ್ಪ ಕಲಾಕೃತಿಗಳಂತೆ ಕಾಣುತ್ತವೆ. ಇವೇ ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಿವೆ ಎನ್ನಬಹುದು. ಬೌಗೋಳಿಕವಾಗಿ ವಿಶೇಷವಾಗಿರುವ ಈ ಉದ್ಯಾನ ಜಲಪಾತ, ಝರಿಗಳಿಂದ ಕೂಡಿದ್ದು, ಆಕರ್ಷಣೀಯವಾಗಿದೆ.

ವಿಶ್ವದ ಅತಿ ದೊಡ್ಡ ದ್ವೀಪ ಫ್ರೇಸರ್


ವಿಶ್ವದ ಅತಿ ದೊಡ್ಡ ದ್ವೀಪವಾದ ಫ್ರೇಸರ್ ಆಸ್ಟ್ರೇಲಿಯಾದ ವಿಶೇಷ ಆಕರ್ಷಣೆ. ೧೨೦ಕಿ.ಮಿ.ಗೂ ಹೆಚ್ಚು ದೂರದ ಹರಡಿಕೊಂಡಿರುವ ಇಲ್ಲಿನ ಕರಾವಳಿ ದೂರ ದೇಶದ ಪ್ರವಾಸಿಗರನ್ನು ಸೆಳೆಯುತ್ತದೆ. ಅತಿ ಹೆಚ್ಚು ಮರಳಿನಿಂದ ತುಂಬಿಕೊಂಡಿರುವ ಈ ದ್ವೀಪ ಕಳೆದ ೭ ಲಕ್ಷ ವರ್ಷಗಳಿಂದ ನಿರಂತರವಾಗಿ ವಾತಾವರಣ ಮತ್ತು ಸಮುದ್ರ ಮಟ್ಟದಲ್ಲಿ ಏರಿಳಿತಗಳನ್ನು ಕಂಡಿದೆ. ಸುಮಾರು ೩೫೦ ವಿವಿಧ ಪ್ರಬೇಧಗಳಿಗೆ ಸೇರಿದ ಪಕ್ಷಿ ಸಂಕುಲವಿದೆ. ೧೮೦೨ರಲ್ಲಿ ಯುರೋಪಿಯನ್ ಮ್ಯಾಥ್ಯೂ ಫ್ಲಿಂಡರ್‍ಸ್ ಎಂಬಾತ ಪದಾರ್ಪಣೆ ಮಾಡಿದ. ೧೮೩೬ರಲ್ಲಿ ಈ ದ್ವೀಪಕ್ಕೆ ಭೇಟಿಕೊಡುವ ಸಂದರ್ಭದಲ್ಲಿ ಸಮುದ್ರ ಮಾರುತಗಳಿಂದ ಬದುಕುಳಿದ ಕೆಲವರು ಈ ದ್ವೀಪದಲ್ಲಿ ಅಬಾರಿಜಿನಲ್ ಜನರ ಆಶ್ರಯ ಪಡೆದವರು. ಅವರಲ್ಲಿದ್ದವರ ಪೈಕಿ ಎಲಿಜಾ ಫ್ರೇಸರ್ ಎಂಬಾಕೆ ಒಬ್ಬಳು. ಆಕೆಯ ಹೆಸರನ್ನೇ ಈ ದ್ವೀಪಕ್ಕೆ ಇಡಲಾಗಿದೆ.

ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್

ಮಳೆಕಾಡುಗಳನ್ನು ಒಳಗೊಂಡಿರುವ ಈ ನೆಲ ನಿಜಕ್ಕೂ ನಿಸರ್ಗ ರಾಣಿ ನೆಲ. ವೈವಿಧ್ಯಮ ಸಸ್ಯ, ಪಕ್ಷಿ ಹಾಗೂ ಪ್ರಾಣಿಗಳು ಇಲ್ಲಿ ಕಾಣಸಿಗುತ್ತವೆ. ಇದೇ ಈ ನೆಲದ ಶ್ರೀಮಂತಿಕೆ. ಆಸ್ಟ್ರೇಲಿಯಾದ ೪೧ ರಾಷ್ಟ್ರೀಯ ಉದ್ಯಾನಗಳ ಪೈಕಿ ಕ್ವೀನ್ಸ್‌ಲ್ಯಾಂಡ್‌ನಲ್ಲೇ ೧೯ ರಾಷ್ಟ್ರೀಯ ಉದ್ಯಾನಗಳು, ೩೧ ರಾಜ್ಯ ಮೀಸಲು ಅರಣ್ಯಗಳು ಇವೆ. ೩೪ ವಿವಿಧ ಜಾತಿಯ ಬಾವಲಿಗಳು, ೫ ಸಾವಿರ ಕೀಟಗಳು, ೪೭ ಜಾತಿ ಕಪ್ಪೆಗಳು, ೧೬೦ ವಿವಿಧ ಪ್ರಬೇಧಗಳಿಗೆ ಸೇರಿದ ಸರೀಸೃಪಗಳು, ೩೦೦ ರೀತಿಯ ಜೇಡಗಳಿಂದ ಇಲ್ಲಿನ ಕಾಡುಗಳು ತುಂಬಿವೆ.

ಸಸ್ತನಿಗಳ ಪಳೆಯುಳಿಕೆ ಪ್ರದೇಶ


ಆಸ್ಟ್ರೇಲಿಯಾದ ರಿವರ್‌ಸ್ಲೀ ಮತ್ತು ನಾರಾಕೂರ್ಟೆ ಎಂಬ ಎರಡು ನಗರಗಳ ವ್ಯಾಪ್ತಿಯಲ್ಲಿ ಈ ಪ್ರದೇಶವಿದೆ. ವಿಶ್ವದ ಹತ್ತು ಪ್ರಮುಖ ಪಳೆಯುಳಿಕೆಗಳು ದೊರೆತಿರುವ ತಾಣಗಳಲ್ಲಿ ಇದೂ ಒಂದು. ೧೧೦ ಮಿಲಿಯನ್ ವರ್ಷಗಳ ಹಿಂದೆ ಜೀವಿಸುತ್ತಿದ್ದ ಬೃಹತ್ ಗಾತ್ರದ ಸಸ್ತನಿಗಳ ಪಳೆಯುಳಿಕೆಗಳು ಇಲ್ಲಿ ಸಿಕ್ಕಿವೆ.
ಪ್ರೆ ಮೈಕೆಲ್ ಆರ್ಚರ್ ಎಂಬುವವರು ಇಲ್ಲಿನ ಬಹುಪಾಲು ಪಳೆಯುಳಿಕೆಗಳನ್ನು ಬೆಳಕಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ.ಆಸ್ಟ್ರೇಲಿಯಾ ಖಂಡದಲ್ಲಿ ಜೀವ ವಿಕಾಸದ ಬಗ್ಗೆ ಈ ಪಳೆಯುಳಿಕೆಗಳು ಸಾಕಷ್ಟು ಸುಳಿವು ನೀಡಿದವು. ೧೯೯೪ರಲ್ಲಿ ಈ ಪಳೆಯುಳಿಕೆ ಪ್ರದೇಶವನ್ನು ಯುನೆಸ್ಕೊ ಪ್ರಮುಖ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸಿತು.

ಹರ್ಡ್ -ಮ್ಯಾಕ್‌ಡೊನಾಲ್ಡ್ ದ್ವೀಪ


ಅಂಟಾರ್ಟಿಕ ಖಂಡಕ್ಕೆ ಹೊಂದಿಕೊಂಡಂತಿರುವ ಈ ದ್ವೀಪ ಸುಮಾರು ೧೭೦೦ಕಿ.ಮೀ. ವಿಸ್ತಾರವಾಗಿ ಹರಡಿಕೊಂಡಿದೆ. ಸೀಲ್ ಮತ್ತು ಪೆಂಗ್ವಿನ್ ಹಕ್ಕಿಗಳು ಹೆಚ್ಚಾಗಿ ಇಲ್ಲಿ ವಾಸಿಸುತ್ತವೆ. ವಿಶ್ವದ ಅತಿ ಸುಂದರ ತಾಣಗಳಲ್ಲಿ ಒಂದು ಎಂಬ ಹೆಗ್ಗಳಿಕೆಯೂ ಈ ದ್ವೀಪದ್ದು. ಈ ದ್ವೀಪದಲ್ಲಿರುವ ಜ್ವಾಲಾಮುಖಿಗಳು ಅತ್ಯಂತ ಕ್ರಿಯಾಶೀಲ ! ಇಂಥ ಜ್ವಾಲಾಮುಖಿಗಳಿ ಇಡೀ ಆಸ್ಟ್ರೇಲಿಯಾದ ಕಂಡುಬರುವುದಿಲ್ಲ. ಶೇ. ೮೦ರಷ್ಟು ಮಂಜಿನಿಂದ ಆವೃತ್ತವಾಗಿರುವ ಈ ಎರಡು ದ್ವೀಪಗಳು ಆಸ್ಟ್ರೇಲಿಯಾ ಪ್ರಮುಖ ಪ್ರವಾಸಿ ತಾಣವಾಗಿದ್ದು, ೧೯೯೭ರಲ್ಲಿ ಪರಂಪರಾ ತಾಣಗಳ ಪಟ್ಟಿಗೆ ಸೇರಿದವು